ಋಣಿಕೆ ಟಿಪ್ಪಣಿ
	
ಸ್ಥೂಲವಾಗಿ ಬಿಕರಿಪಟ್ಟಿಯನ್ನೇ (ಇನ್‍ವಾಯ್ಸ್) ಹೋಲುವ ಒಂದು ದಾಖಲೆ; ಒಬ್ಬನ ಲೆಕ್ಕಪುಸ್ತಕಗಳಲ್ಲಿ ಇನ್ನೊಬ್ಬನ ಲೆಕ್ಕವನ್ನು ಇಂತಿಷ್ಟು ಋಣಿಸಲಾಗಿದೆಯೆಂದು (ಡೆಬಿಟೆಡ್) ಮೊದಲನೆಯವನು ಎರಡನೆಯವನಿಗೆ ತಿಳಿಸುವ ಟಿಪ್ಪಣಿ (ಡೆಬಿಟ್ ನೋಟ್).
	
ಮಾರಾಟವಾದ ಸರಕುಗಳನ್ನು ಕಳಿಸುವಾಗ ಮಾರಾಟಗಾರ ಖರೀದಿದಾರನಿಗೆ ಬಿಕರಿಪಟ್ಟಿ ಕಳಿಸುತ್ತಾನೆ. ಇದರಲ್ಲಿ ಸಂಬಂಧಪಟ್ಟ ಸರಕುಗಳ ವಿವರಗಳಿದ್ದು ಖರೀದಿದಾರ ಮಾರಾಟಗಾರನಿಗೆ ಕೊಡಬೇಕಾದ ಮೊಬಲಗು ನಮೂದಾಗಿರುತ್ತದೆ. ಈ ಮೊಬಲಗು ತಪ್ಪಾಗಿರಬಹುದು; ಸರಿಯಾದ ಮೊತ್ತಕ್ಕಿಂತ ಹೆಚ್ಚಾಗಿಯಾಗಲಿ ಕಡಿಮೆಯಾಗಿಯಾಗಲಿ ಇರಬಹುದು. ಮೊಬಲಗು ಕಡಿಮೆಯಾಗಿದ್ದಾಗ ಸರಿಯಾದ ಮೊತ್ತಕ್ಕೂ ಬಿಕರಿಪಟ್ಟಿಯಲ್ಲಿ ಸೂಚಿಸಲಾಗಿರುವ ಮೊಬಲಗಿಗೂ ಇರುವ ವ್ಯತ್ಯಾಸದ ಹಣವನ್ನು ಖರೀದಿದಾರ ಬಿಕರಿದಾರನಿಗೆ ಕೊಡಬೇಕಾಗುತ್ತದೆ. ಬಿಕರಿದಾರ ಖರೀದಿದಾರನ ಲೆಕ್ಕವನ್ನು ಈ ಹಣಕ್ಕೆ ಋಣಿಸಿ ಈ ತಿದ್ದುಪಡಿಯನ್ನು ಖರೀದಿದಾರನ ತಿಳಿವಳಿಕೆಗಾಗಿ ಟಿಪ್ಪಣಿಯ ರೂಪದಲ್ಲಿ ಕಳುಹಿಸಿಕೊಡುತ್ತಾನೆ.
	
ಒಂದು ವೇಳೆ ಬಿಕರಿಪಟ್ಟಿಯಲ್ಲಿ ಸರಿಯಾದ ಮೊಬಲಗಿಗಿಂತ ಹೆಚ್ಚು ಸೂಚಿತವಾಗಿದ್ದರೆ ಆಗ ಬಿಕರಿದಾರ ಈ ವ್ಯತ್ಯಾಸಕ್ಕೆ ಖರೀದಿದಾರನ ಲೆಕ್ಕವನ್ನು ಧನಿಸಲಾಗಿದೆ ಎಂದು ತಿಳಿಸಿ ಖರೀದಿದಾರನಿಗೆ ಟಿಪ್ಪಣಿ ಕಳುಹಿಸಬಹುದು (ಇದು-ಧನಿಕ ಟಿಪ್ಪಣಿ); ಅಥವಾ ಇದನ್ನು ಖರೀದಿದಾರನೇ ಕಂಡುಹಿಡಿದರೆ ಆತ ತನ್ನ ಪುಸ್ತಕದಲ್ಲಿ ಬಿಕರಿದಾರನ ಲೆಕ್ಕದಲ್ಲಿ ಇಷ್ಟು ಹಣ ಋಣಿಸಲಾಗಿದೆಯೆಂದು ಬಿಕರಿದಾರನಿಗೆ ತಿಳಿಸಬೇಕಾಗಬಹುದು. ಇದು ಋಣಿಕ ಟಿಪ್ಪಣಿ ಕಳಿಸಬೇಕಾದ ಇನ್ನೊಂದು ಸಂದರ್ಭ.
	
ಎರಡನೆಯದಾಗಿ ಬಿಕರಿದಾರನಿಂದ ಖರೀದಿದಾರ ಕೊಂಡ ಸರಕನ್ನು ಯಾವುದಾದರೂ ಯೋಗ್ಯಕಾರಣಗಳಿಗಾಗಿ ಬಿಕರಿದಾರನಿಗೆ ಹಿಂದಿರುಗಿಸಿದಾಗ ಋಣಿಕೆ ಟಿಪ್ಪಣಿ ಕಳಿಸುತ್ತಾನೆ. ಇಂಥ ಖರೀದಿ ವಾಪಸಾತಿ (ಪರ್ಚೇಸ್ ರಿಟನ್ರ್ಸ್) ಸಂದರ್ಭದಲ್ಲಿ ಕಳಿಸುವ ಋಣಿಕೆ ಟಿಪ್ಪಣಿಯಲ್ಲಿ ವಾಪಸು ಕಳಿಸುತ್ತಿರುವ ಸರಕಿನ ವಿವರಗಳೂ ಋಣಿಕೆ ಟಿಪ್ಪಣಿ ನಮೂದಾಗಿರುತ್ತವೆ.
	
ಮೂರನೆಯದಾಗಿ ಬಿಕರಿಪಟ್ಟಿಯಲ್ಲಿ ನಮೂದಾಗಿರುವ ಸರಕುಗಳಲ್ಲಿ ಕೆಲವು ತಲುಪದಿದ್ದರೆ ಅಥವಾ ಹಾನಿಗೊಂಡಿದ್ದರೆ ಕಡಿಮೆ ಬಿದ್ದಿರುವ ಸರಕಿನ ಬಗ್ಗೆ ಖರೀದಿದಾರನ ಋಣಿಕೆ ಟಿಪ್ಪಣಿ ಕಳಿಸುತ್ತಾನೆ.
	
ಇದೇ ರೀತಿ, ಒಪ್ಪಂದದಲ್ಲಿ ಇಲ್ಲದ ವೆಚ್ಚ ಯಾವುದಾದರೂ ಬಿಕರಿಪಟ್ಟಿಯಲ್ಲಿ ಸೇರಿದ್ದರೆ ಅದನ್ನು ಸರಿಪಡಿಸಲೂ ಖರೀದಿದಾರ ಋಣಿಕೆ ಟಿಪ್ಪಣಿ ಕಳಿಸುತ್ತಾನೆ.
	
ಬಿಕರಿ-ಖರೀದಿಗಳೇ ಅಲ್ಲದೆ ಬೇರೆ ಬಗೆಯ ವ್ಯವಹಾರಗಳಲ್ಲೂ ಒಬ್ಬನ ಪುಸ್ತಕಗಳಲ್ಲಿ ಇನ್ನೊಬ್ಬನ ಲೆಕ್ಕವನ್ನು ಋಣಿಸಿದಾಗ ಋಣಿಕೆಪಟ್ಟಿ ಕಳಿಸುವ ವಾಡಿಕೆಯಿದೆ. ಉದಾಹರಣೆ: ಬ್ಯಾಂಕು ವ್ಯವಹಾರಗಳಲ್ಲಿ ಗ್ರಾಹಕನ ಲೆಕ್ಕವನ್ನು ಋಣಿಸುವಾಗ. 
	
ಋಣಿಕೆ ಟಿಪ್ಪಣಿಯಲ್ಲಿ ಕ್ರಮಸಂಖ್ಯೆಯೂ ಋಣಿಕೆ ಟಿಪ್ಪಣಿ ಕಳಿಸುವವನ ಹಾಗೂ ಋಣಿಕೆಗೆ ಒಳಗಾದವನ ಪೂರ್ಣ ವಿಳಾಸಗಳೂ ಇದ್ದು, ಋಣಿಕೆ ಪಡೆದವನನ್ನು ಉದ್ದೇಶಿಸಿ ಕಳಿಸಲಾಗುತ್ತದೆ.
	
ಇಂಥ ಒಂದು ಋಣಿಕೆ ಟಿಪ್ಪಣಿಯ ಮಾದರಿಯನ್ನು ಮುಂದೆ ಕೊಟ್ಟಿದೆ.
ಋಣಿಕೆ ಟಿಪ್ಪಣಿ ಸಂ. 5		
ದೂರವಾಣಿ : 96789						37, ಮಂಡಿಪೇಟೆ	
ತಂತಿ: " ಕೊಂಡಯ್ಯ "						 ದಾವಣಗೆರೆ,
	
ಶ್ರೀ ಮಾರಪ್ಪನವರು,					 ಋಣಿ	
	
15, ಸಂತೇಪೇಟೆ,
	ಮೈಸೂರು.

ಕೊಂಡಯ್ಯ ಅವರಿಗೆ
ದಿನಾಂಕ
ವಿವರ

ಮೊಬಲಗು

1970 ಜ. 6
4ನೆಯ ಜನವರಿ 1970ರ ಬಿಕರಿಪಟ್ಟಿ ಸಂ.49ರಲ್ಲಿ ಕಂಡು ಬಂದ ತಪ್ಪಿಗಾಗಿ

 ರೂ.
 ರೂ. ಪೈ.
16    
00
16 00 

(ಡಿ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ